Psalms 42

ದ್ವಿತೀಯ ಭಾಗವು 42 - 72

ದೇಶಾಂತರದಲ್ಲಿರುವ ಭಕ್ತನು ದೇವದರ್ಶನಕ್ಕಾಗಿ ಹಂಬಲಿಸುವುದು. ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಪದ್ಯ.

1ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಹೇಗೋ,
ಹಾಗೆಯೇ ನನ್ನ ಮನಸ್ಸು ನಿನ್ನನ್ನು ಬಯಸುತ್ತದೆ.
2 ನನ್ನ ಮನಸ್ಸು ದೇವರಿಗಾಗಿ, ಚೈತನ್ಯಸ್ವರೂಪನಾದ ದೇವರಿಗಾಗಿ ಹಾರೈಸುತ್ತದೆ;
ನಾನು ಯಾವಾಗ ಹೋಗಿ ದೇವರ ಸನ್ನಿಧಿಯಲ್ಲಿ ಸೇರುವೆನೋ?

3

<<ನಿನ್ನ ದೇವರು ಎಲ್ಲಿ?>> ಎಂದು ಜನರು

ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ,
ಹಗಲಿರುಳು ನನಗೆ ಕಣ್ಣೀರೇ ಆಹಾರವಾಯಿತು.
4 ನಾನು ಭಜನೋತ್ಸವದಲ್ಲಿ ಸೇರಿ,
ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ, ಸ್ತೋತ್ರಪದಗಳನ್ನು ಹಾಡುತ್ತಾ,
ದೇವಾಲಯಕ್ಕೆ ಹೋಗುತ್ತಿದ್ದದ್ದನ್ನೇ ನೆನಪಿಗೆ ತಂದುಕೊಂಡು,
ನನ್ನೊಳಗೆ ನಾನೇ ಹಂಬಲಿಸುತ್ತಿರುವೆನು.

5

ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು?

ಹೀಗೆ ವ್ಯಥೆಪಡುವುದೇಕೆ?
ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ.
ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.
6 ನನ್ನ ದೇವರೇ, ನನ್ನ ಪ್ರಾಣವು ಕುಗ್ಗಿಹೋಗಿದೆ;
ಆದುದರಿಂದ ಯೊರ್ದನ್ ಹೊಳೆಯ ದೇಶ,
ಹೆರ್ಮೋನ್ ಪರ್ವತ, ಮಿಸಾರ್ ಬೆಟ್ಟ ಇವುಗಳಲ್ಲಿರುವವನಾಗಿ ನಿನ್ನನ್ನು ಸ್ಮರಿಸುತ್ತೇನೆ.

7

ನಿನ್ನ ಜಲಪಾತಗಳಿಂದ ಉಂಟಾಗುವ ಮಹಾಘೋಷವು

ಒಂದು ಪ್ರವಾಹವು ಮತ್ತೊಂದು ಪ್ರವಾಹವನ್ನು ಕರೆಯುತ್ತದೋ ಎಂಬಂತಿರುವುದು.
ಹಾಗೆಯೇ ನೀನು ಅಲ್ಲಕಲ್ಲೋಲವಾದ ದುಃಖ ಪ್ರವಾಹದ ತೆರೆಗಳನ್ನು
ನನ್ನ ತಲೆಯ ಮೇಲಿಂದ ದಾಟಿಸಿದಿಯಲ್ಲಾ.
8 ಯೆಹೋವನು ಹಗಲಿನಲ್ಲಿ ತನ್ನ ಪ್ರೀತಿಯನ್ನು ನನಗೆ ಅನುಗ್ರಹಿಸುವನು;
ರಾತ್ರಿ ವೇಳೆಯಲ್ಲಿಯೂ ಆತನ ಕೀರ್ತನೆ ನನ್ನಲ್ಲಿರುವುದು.
ನನ್ನ ಜೀವಾಧಾರಕನಾದ ದೇವರನ್ನು ಪ್ರಾರ್ಥಿಸುವೆನು.

9

ನಾನು ನನ್ನ ಶರಣನಿಗೆ, <<ದೇವರೇ, ಏಕೆ ನನ್ನನ್ನು ಮರೆತುಬಿಟ್ಟಿದ್ದಿ?

ನಾನು ಏಕೆ ಶತ್ರುಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು?>> ಎಂದು ಮೊರೆಯಿಡುವೆನು.
10 ನನ್ನ ವಿರೋಧಿಗಳು, <<ನಿನ್ನ ದೇವರು ಎಲ್ಲಿ?>> ಎಂದು ಯಾವಾಗಲೂ ನನ್ನನ್ನು ಪರಿಹಾಸ್ಯ ಮಾಡುವುದರಿಂದ
ನನ್ನ ಎಲುಬುಗಳೆಲ್ಲಾ ಮುರಿದ ಹಾಗಿವೆ.

11

ನನ್ನ ಮನವೇ, ನೀನು ಕುಗ್ಗಿ ಹೋಗಿರುವುದೇನು?

ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು;
ಆತನೇ ನನಗೆ ರಕ್ಷಕನೂ, ದೇವರೂ ಆಗಿದ್ದಾನೆ;
ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

Copyright information for KanULB